ಅರಣ್ಯ ಸಂರಕ್ಷಣೆ ಪ್ರಬಂಧ


 ಅರಣ್ಯ ಸಂರಕ್ಷಣೆ

ಪೀಠಿಕೆ:

  • ಭೂಮಿ ದಿನವನ್ನು ಇದೇ 2021 ಏಪ್ರಿಲ್ 22 ರಂದು ವಿಶ್ವಾದ್ಯಂತ ಆಚರಿಸಲಾಗುತ್ತಿದೆ. 1970 ರಲ್ಲಿ ಮೊದಲ ಭೂಮಿ ದಿನ ಆಚರಿಸಲಾಯಿತು. 193 ರಾಷ್ಟ್ರಗಳಲ್ಲಿ  ಈ ದಿನ ಆಚರಿಸಲಾಗುತ್ತದೆ. ಈ ವರ್ಷದ ಭೂ ದಿನದ ಥೀಮ್ "ಭೂಮಿಯ ಮರುಸ್ಥಾಪನೆ" ಅಥವಾ "Restore The Earth" ಆಗಿದೆ. ಅರಣ್ಯಗಳು ಭೂಮಿಯನ್ನು  ಮತ್ತೆ ಆರೋಗ್ಯಕರವಾಗಿ ಉಸಿರಾಡುವಂತೆ ಮಾಡಬಲ್ಲವು.  ಏಕೆಂದರೆ ಅರಣ್ಯಗಳು ಭೂಮಿಯ  ಶ್ವಾಸಕೋಶಗಳು. ಇವುಗಳು ಊನವಾದರೆ ಜನರ ಜೀವನ ದುಸ್ಸಾಹಸವೇ ಸರಿ. ಆದುದರಿಂದ ಅವುಗಳ ರಕ್ಷಣೆ ಪ್ರತಿಯೊಬ್ಬನ ಆದ್ಯ ಕರ್ತವ್ಯವಾಗಿದೆ. ಅರಣ್ಯಗಳು ಭೂಭಾಗದೆಲ್ಲೆಡೆ ಸಮಾನವಾಗಿ ರೂಪಿತವಾಗಿರದಿದ್ದರೂ ಲಾಭ ಮಾತ್ರ ಎಲ್ಲರಿಗೂ ಸಮಾನವಾಗಿದೆ.

ವಿಷಯ ಬೆಳವಣಿಗೆ:

  • ಅರಣ್ಯಗಳು ಮಾನವನಿಗೆ ಶುದ್ಧ ಹವೆಯನ್ನು ನೀಡುವುದಷ್ಟೇ ಅಲ್ಲ, ಮಳೆಯ ಮಾರುತಗಳನ್ನು ಮಳೆಯನ್ನಾಗಿ ಪರಿವರ್ತಿಸುವ ಮಾಧ್ಯಮಗಳೆಂದರೆ ತಪ್ಪಾಗಲಾರದು. ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆ ತನ್ನ ಅಗತ್ಯಗಳ ಪೂರೈಕೆಗಾಗಿ ಕಾಡುಗಳನ್ನು ಬರಿದು ಮಾಡುತ್ತಿದೆ.
  • ದುಷ್ಪರಿಣಾಮಗಳು: ಅರಣ್ಯನಾಶದಿಂದ ಪ್ರಾಣಿಜಗತ್ತಿಗೆ ಅತ್ಯವಶ್ಯಕವಾಗಿ ಬೇಕಾದ ಶುದ್ಧ ಹವೆ ಅಪೇಕ್ಷಿತ ಪ್ರಮಾಣದಲ್ಲಿ ಲಭಿಸುವುದಿಲ್ಲ. ವಾಯುವಿನಲ್ಲಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣವು ಕ್ರಮೇಣ ಜಾಸ್ತಿಯಾಗಿ ಜನರ ಉಸಿರಾಟಕ್ಕೆ ತೊಂದರೆಯಾಗುವುದು. ಮಾನವನ ಉಸಿರಾಟಕ್ಕೆ ಧಕ್ಕೆ ಉಂಟಾದರೆ ಇನ್ನು ಬದುಕು ಹೇಗೆ ಹಸನಾದೀತು? ಇಂಗಾಲದ ಡೈ ಆಕ್ಸಡ್‌ನ ಪ್ರಮಾಣ ವಾತಾವರಣದಲ್ಲಿ ಹೆಚ್ಚಿದಂತೆ ಉಷ್ಣಾಂಶವೂ ಹೆಚ್ಚುತ್ತದೆ. ತತ್ಪಲವಾಗಿ ವಾತಾವರಣದಲ್ಲಿನ ಉಷ್ಣತೆಯೂ ಹೆಚ್ಚಾಗುತ್ತದೆ. ಇದರಿಂದಾಗಿ ಧ್ರುವ ಪ್ರದೇಶಗಳಲ್ಲಿ ಸಂಗ್ರಹವಾಗಿರುವ ಹಿಮರಾಶಿ ಕರಗಿ ನೀರಾಗಿ ಹರಿದು ಸಾಗರಗಳ ಮಟ್ಟವು ಏರಿ ಕರಾವಳಿ ಪುದೇಶಗಳಲ್ಲಿ ವಾಸಿಸುತ್ತಿರುವ ಜನ-ಜಾನುವಾರುಗಳು ನೀರು ಪಾಲಾಗುತ್ತವೆ.
  • ಅರಣ್ಯದ ಉತ್ಪನ್ನಗಳು ಸಾಕಷ್ಟು ಪ್ರಮಾಣದಲ್ಲಿ ಲಭಿಸದೆ ಜನಜೀವನ ಅಸ್ತವ್ಯಸ್ತವಾಗುವುದು. ಮರಮುಟ್ಟು, ಉರುವಲು ಇತ್ಯಾದಿಗಳಿಗೆ ಬಳಸಲಾಗುವ ಮರಗಳು ಇಲ್ಲದಾಗುತ್ತವೆ. ಅದನ್ನಾಶ್ರಯಿಸಿದ ಕೈಗಾರಿಕೆಗಳು ಸ್ಥಗಿತಗೊಳ್ಳುತ್ತವೆ. ಅವುಗಳನ್ನೇ ಅವಲಂಬಿಸಿದ ಕುಟುಂಬಗಳು ಬೀದಿಗೆ ಬೀಳುತ್ತದೆ. ವನ್ಯಪ್ರದೇಶವಿಲ್ಲದ ಮೇಲೆ ವನ್ಯಜೀವಿಗಳಿಗೆ ತಾವೆಲ್ಲಿಯದು? ವನ್ಯಜೀವಿಗಳು ಜನಜೀವನದ ಮೇಲೆ ಧಾಳಿ ಮಾಡುತ್ತವೆ. ತಮ್ಮ ಉಳಿವಿಗಾಗಿ ಹೋರಾಟ ಹಾಗೂ ಬೆಳೆಗಳ ಮೇಲೆ ಕಾಡು ಪ್ರಾಣಿಗಳು ದಾಳಿ ಮಾಡಿ ಮಾನವನ ಜೀವನವನ್ನು ನರಕಸದೃಶಗೊಳಿಸುವುದಿಲ್ಲವೇ?

ಉಪ ಸಂಹಾರ:

  • ಮಾನವನು ಸೃಷ್ಟಿಯಲ್ಲಿ ಕಿರೀಟಪ್ರಾಯನಾದವನು (Man is the Crown of Creation). ಆದುದರಿಂದ ಅರಣ್ಯ ರಕ್ಷಣೆಯು ಬುದ್ಧಿವಂತನಾದ ಮಾನವನ ಮೂಲಭೂತ ಕರ್ತವ್ಯವಾಗಿದೆ. ಅರಣ್ಯ ರಕ್ಷಣೆ ಮಾಡಿ ಇಡೀ ಜಗತ್ತನ್ನು ಅಪಾಯದಿಂದ ಪಾರು ಮಾಡಬೇಕಾದ ಜವಾಬ್ದಾರಿ ನಮ್ಮ ಕೈಯಲ್ಲಿದೆ. ಇದಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು.

Post a Comment

0 Comments
* Please Don't Spam Here. All the Comments are Reviewed by Admin.