ಅಸಾಮಾನ್ಯ ಗಣಿತಜ್ಞನ ನೆನಪಿನಲ್ಲಿ - ರಾಷ್ಟ್ರೀಯ ಗಣಿತ ದಿನ
ಪೀಠಿಕೆ:
- ಎಸ್. ರಾಮಾನುಜನ್ ಭಾರತ ಕಂಡ ಅದ್ವಿತೀಯ ಗಣಿತಜ್ಞ. ಬದುಕಿದ್ದು ಸ್ವಲ್ಪ ಕಾಲವಾದರೂ ಅವರು ಗಣಿತದ ಬಗ್ಗೆ ನಡೆಸಿದ ಪ್ರಯೋಗಗಳು, ಸಂಶೋಧನೆಗಳು ಜಗದ್ವಿಖ್ಯಾತವಾಗಿವೆ. ಇಂದಿಗೂ ರಾಮಾನುಜನ್ ಅವರನ್ನು ಗಣಿತದ ಸಂಶೋಧನೆಗಳಿಗಾಗಿ ನೆನೆಯಲಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಮಾನುಜನ್ ಅವರು ಜನಿಸಿದ ದಿನ (ಡಿಸೆಂಬರ್ 22) ವನ್ನು ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಲಾಗುತ್ತಿದೆ.
ವಿಷಯ ಬೆಳವಣಿಗೆ:
- ಶ್ರೀನಿವಾಸ ರಾಮಾನುಜನ್ ತಮಿಳುನಾಡಿನ ಈರೋಡ್ ನಲ್ಲಿ 1887ರಲ್ಲಿ ಜನಿಸಿದರು. ಇವರ ತಂದೆ ಬಟ್ಟೆ ವ್ಯಾಪಾರಿಯ ಬಳಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ತಾಯಿ ಗೃಹಿಣಿ. ರಾಮಾನುಜನ್ ಹುಟ್ಟಿದ ನಂತರ ಅವರ ಕುಟುಂಬ ಕುಂಭಕೋಣಂಗೆ ವಲಸೆ ಹೋಯಿತು. ಮನೆಯಲ್ಲಿ ಬಡತನವಿದ್ದರೂ ರಾಮಾನುಜನ್ ವಿದ್ಯಾಭ್ಯಾಸದಲ್ಲಿ ತುಂಬಾ ಮುಂದಿದ್ದರು. ಹತ್ತನೇ ವಯಸ್ಸಿಗೆ ಪ್ರತಿಭಾವಂತ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದರು.
- ರಾಮಾನುಜನ್ ಅವರು ಕುಂಭಕೋಣಂ ಟೌನ್ ಹೈಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ, ತಾವಾಗಿಯೇ ಗಣಿತದ ಬಗ್ಗೆ ಅಧ್ಯಯನ ಮಾಡುತ್ತಿದ್ದರು. ಪ್ರತಿಭಾವಂತ ರಾಮಾನುಜನ್ ಅವರಿಗೆ ಸ್ಕಾಲರ್ ಶಿಪ್ ದೊರೆತಿದ್ದರಿಂದ ಕುಂಭಕೋಣಂನ ಗವರ್ನಮೆಂಟ್ ಆರ್ಟ್ಸ್ ಕಾಲೇಜಿಗೆ ಸೇರಿ ವಿದ್ಯಾಭ್ಯಾಸ ಮುಂದುವರೆಸಿದರು. ಆದರೆ ಗಣಿತದ ಮೇಲಿನ ಒಲವಿನಿಂದ ಬೇರೆ ವಿಷಯಗಳಲ್ಲಿ ಅನುತ್ತೀರ್ಣರಾದರು. ಪರಿಣಾಮ ಸ್ಕಾಲರ್ ಶಿಪ್ ಕೈತಪ್ಪಿ ಹೋಯಿತು. 1905ರಲ್ಲಿ ಮದ್ರಾಸಿಗೆ ತೆರಳಿದ ರಾಮಾನುಜನ್ ಪಚೈಯಪ್ಪ ಕಾಲೇಜಿಗೆ ಸೇರಿಕೊಂಡರು. ಅಲ್ಲಿಯೂ ಅದೇ ಕಥೆ ಪುನರಾವರ್ತನೆಯಾಯಿತು.
- ಹಿರಿಯರೊಬ್ಬರ ಶಿಫಾರಸ್ಸಿನಿಂದ ಮದ್ರಾಸಿನಲ್ಲಿ ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಅವರಿಗೆ ಕೆಲಸ ದೊರೆಯಿತಾದರೂ, ಅದು ಕೇವಲ ಎರಡು ತಿಂಗಳ ಮಟ್ಟಿಗೆ ಮಾತ್ರ ಇತ್ತು. ಪುನಃ ಹಸಿದ ಹೊಟ್ಟೆಯ ಬಡತನ, ಅನಾರೋಗ್ಯ ಅವರಿಗೆ ಎದುರಾಯಿತು. ಈ ನಡುವೆ ಮದ್ರಾಸಿನ ಪೋರ್ಟ್ ಟ್ರಸ್ಟ್ ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡಲು ಆರಂಭಿಸಿದರು. ಏತನ್ಮಧ್ಯೆ ಶ್ರೀನಿವಾಸ ರಾಮಾನುಜನ್ ಅವರ ಬೆಂಗಾವಲಾಗಿದ್ದ ಪ್ರೊ. ವಿ.ಪಿ. ಶೇಷು ಅಯ್ಯರ್ ಕಳುಹಿಸಲ್ಪಟ್ಟ ಪ್ರಶ್ನೋತ್ತರಗಳ ರೂಪದಲ್ಲಿ ಇಂಡಿಯನ್ ಮ್ಯಾಥಮೆಟಿಕಲ್ ಸೊಸೈಟಿಯ ನಿಯತಕಾಲಿಕ 1911ರಲ್ಲಿ ಪ್ರಕಟವಾಯಿತು. ಈ ಸಂಪುಟದ ಒಂದು ಸಂಚಿಕೆಯಿಂದ ರಾಮಾನುಜನ್ನರ ಬರ್ನೌಲಿ ಸಂಖ್ಯೆಗಳ ಕೆಲವು ಲಕ್ಷಣಗಳು ಪ್ರಕಟಗೊಂಡಿತು.
- ಪ್ರೊ ಪಿ.ವಿ. ಶೇಷು ಅಯ್ಯರ್ ಅವರು ಟ್ರಿನಿಟಿ ಕಾಲೇಜಿನ ಫೆಲೋ ಆಗಿದ್ದ ಪ್ರೊ. ಜಿ.ಎಚ್. ಹಾರ್ಡಿ ಮತ್ತು ಕೇಂಬ್ರಿಡ್ಜ್ ಗಣಿತ ಉಪನ್ಯಾಸಕರಾಗಿದ್ದ ಕ್ಯಾಲೆ ಅವರಿಗೆ ರಾಮಾನುಜನ್ ತಮ್ಮ ಗಣಿತೀಯ ಶೋಧನೆಗಳನ್ನು ತಿಳಿಸಬೇಕೆಂದು ಒತ್ತಾಯಿಸಿದರು. ಇದು ಅವರ ಜೀವನದ ದಿಕ್ಕನ್ನೇ ಬದಲಿಸಿತು. ತಮ್ಮ ಮೊದಲ ಪತ್ರದಲ್ಲೇ ರಾಮಾನುಜನ್ ನೂರಕ್ಕೂ ಹೆಚ್ಚು ಪ್ರಮೇಯಗಳನ್ನು ವಿವರಿಸಿದ್ದರು. ಕ್ರಮೇಣ ಶ್ರೀನಿವಾಸನ್ ಕೇಂಬ್ರಿಡ್ಜ್ ಗೆ ಬಂದಿಳಿದರು. 1916ಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿ ಪಡೆದ ರಾಮಾನುಜನ್ 1918ರಲ್ಲಿ ಲಂಡನ್ನಿನ ರಾಯಲ್ ಸೊಸೈಟಿಯ ಸದಸ್ಯರಾದರು. ರಾಮಾನುಜನ್ ಅವರು ನಂಬರ್ ಥಿಯರಿ, ಅವಿಭಾಜ್ಯ ಸಂಖ್ಯೆಗಳು , ಗಣಿತದ ಸೂತ್ರಗಳು ಮತ್ತು ಪಾರ್ಟಿಷನ್ ಸಂಖ್ಯೆಗಳ ಬಗ್ಗೆ ಸಂಶೋಧನೆ ನಡೆಸಿದ್ದರು.
- ಆದರೆ ದುರದೃಷ್ಟವಶಾತ್ ಅವರ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಿತ್ತು. ರಾಮಾನುಜಂ ಆಸ್ಪತ್ರೆಯಲ್ಲಿ ಅವರ ಕೊನೆಯ ದಿನಗಳಲ್ಲಿದ್ದಾಗ. ಅವರ ಸ್ನೇಹಿತ ಹಾರ್ಡಿ ಅವರನ್ನು ಭೇಟಿ ಮಾಡಿದ. ಮತ್ತು ಅವರು ತೆಗೆದುಕೊಂಡ ಟ್ಯಾಕ್ಸಿ ಸಂಖ್ಯೆಯಲ್ಲಿ 1729 ಸಂಖ್ಯೆ ಇದೆ ಎಂದು ಹೇಳಿದರು. ಆಗ ರಾಮಾನುಜಮ್ ಇದು ತುಂಬಾ ವಿಶಿಷ್ಟವಾದ ಸಂಖ್ಯೆ ಎಂದು ಹೇಳಿದರು.
- 1729 = 1x1x1 + 12x12x12
- 1729 = 9 × 9 × 9 + 10x10x10
- ಇದು 2 ಘನಗಳ ಮೊತ್ತವಾದ ಚಿಕ್ಕ ಸಂಖ್ಯೆ.
- 1729 ಅನ್ನು ರಾಮಾನುಜಮ್ ಮತ್ತು ಹಾರ್ಡಿ ಸಂಖ್ಯೆ ಎಂದೂ ಕರೆಯುತ್ತಾರೆ
- ಉತ್ತಮ ವೈದ್ಯಕೀಯ ಸೌಲಭ್ಯ ಗಳ ಹೊರತಾಗಿಯೂ ಅವರು ಏಪ್ರಿಲ್ 26, 1920 ರಂದು ತಮ್ಮ 32 ವರ್ಷಗಳ ಸಣ್ಣ ವಯಸ್ಸಿನಲ್ಲೇ ಇಹ ಲೋಕವನ್ನು ತ್ಯಜಿಸಿದರು.