ಎಲ್ಲರಂಥವನಲ್ಲ ನನ ಗಂಡ

 ಎಲ್ಲರಂಥವನಲ್ಲ ನನ ಗಂಡ


ಎಲ್ಲರಂಥವನಲ್ಲ ನನ ಗಂಡ

ಬಲ್ಲಿದನು ಪುಂಡ

ಎಲ್ಲರಂಥವನಲ್ಲ ನನ ಗಂಡ ||ಪಲ್ಲ||


ಸೊಲ್ಲು ಸೊಲ್ಲಿಗೆ ಬಯ್ದು ನನ್ನ

ಎಲ್ಲಿಗೋಗದ್ಹಾಂಗ ಮಾಡಿಟ್ಟಾ

ಕಾಲ್ಮುರಿದು ಬಿಟ್ಟಾ ||ಅ.ಪ.||


ಮಾತಾಪಿತರ ಮನೆಯೊಳಿರುತಿರಲು

ಮನಸೋತು ಮೂವರು

ಪ್ರೀತಿಗೆಳೆತನ ಮಾತಿನೊಳತಿರಲು

ಮೈನೆರೆತು ಮಾಯದಿ

ಘಾತವಾಯಿತು ಯವ್ವನವು ಬರಲು

ಹಿಂಗಾಗುತಿರಲು

ದೂತೆ ಕೇಳ್ನಿಮ್ಮವರು ಶೋಭನ

ರೀತಿಚಾರವನೆಲ್ಲ ತೀರಿಸಿ

ಆತನೊಳು ಮೈಹೊಂದಿಕೆಯ ಮಾಡಿ

ಮಮತೆಯಲಿ ಕೂಡಿ ||೧||


ಅಕ್ಕತಂಗಿಯರಾರು ಮಂದಿಗಳಾ

ಅಗಲಿಸಿದನೈವರ

ಕಕ್ಕುಲಾತಿಯ ಅಣ್ಣತಮ್ಮಗಳಾ

ನೆದರೆತ್ತಿ ಮ್ಯಾಲಕ

ನೋಡಗೊಡದೇ ಹತ್ತು ದಿಕ್ಕುಗಳಾ

ಮಾಡಿದನೆ ಮರುಳಾ

ತೆಕ್ಕೆಯೊಳು ಬಿಗಿದಪ್ಪಿ ಸುರತಾ-

ನಂದಸುಖ ತಾಂಬೂಲ ರಸಗುಟ-

ಗಿಕ್ಕಿ ಅಕ್ಕರತಿಯಲಿ ನಗುವನು ತಾ

ಬಹು ಸುಗುಣನೀತಾ ||೨||


ತುಂಟನಿವ ಸೊಂಟಮುರಿ ಹೊಡೆದಾ

ಒಣ ಪಂಟುಮಾತಿನ

ಗಂಟಗಳ್ಳರ ಮನೆಗೆ ಬರಗೊಡದಾ

ಹದಿನೆಂಟು ಮಂದಿ

ಕುಂಟಲಿಯರ ಹಾದಿಯನು ಕಡಿದಾ

ಎನ್ನ ಕರವ ಪಿಡಿದಾ

ಕುಂಟಕುರುಡಾರೆಂಟು ಮಂದಿ

ಗಂಟು ಬಿದ್ದರೆ ಅವರ ಕಾಣುತ

ಗಂಟಲಕೆ ಗಾಣಾದನೇಳಕ್ಕಾ

ತಕ್ಕವನೆ ಸಿಕ್ಕಾ ||೩||


ಅತ್ತೆಮಾವರ ಮನೆಯ ಬಿಡಿಸಿದನೇ

ಮತ್ತೆಲ್ಲಿ ಮೂವರ

ಮಕ್ಕಳೈವರು ಮಮತೆಯ ಕೆಡಿಸಿದನೇ

ಎನ್ನನು ತಂದು

ರತ್ನಜ್ಯೋತಿಯ ಪ್ರಭೆಯೊಳಿರಿಸಿದನೇ

ಎನಗೊತ್ತಿನವನು

ಎತ್ತ ಹೋಗದೆ ಚಿತ್ತವಗಲದೆ

ಗೊತ್ತಿನಲಿ ಇಟ್ಟು ಎನ್ನನು

ಮುತ್ತಿನಾ ಮೂಗುತಿಯ ಕೊಟ್ಟಾನೇ

ಅವನೇನು ದಿಟ್ಟನೇ ||೪||


ಕಾಂತೆ ಕೇಳೆ ಕರುಣ ಗುಣದಿಂದ

ಎನಗಿಂಥ ಪುರುಷನು

ಬಂದು ದೊರಕಿದ ಪುಣ್ಯಫಲದಿಂದಾ

ಎನ್ನಂತರಂಗದ

ಕಾಂತ ಶ್ರೀ ಗುರುನಾಥ ಗೋವಿಂದಾ

ಶಿಶುನಾಳದಿಂದ

ಕಾಂತೆ ಬಾರೆಂತೆಂದು ಕರೆದೇ-

ಕಾಂತ ಮಂದಿರದೊಳಗೆ ಒಯ್ದು

ಭ್ರಾಂತಿ ಭವ ದುರಿತವನು ಪರಿಹರಿಸಿ

ಚಿಂತೆಯನು ಮರಸಿ ||೫||

Post a Comment

0 Comments
* Please Don't Spam Here. All the Comments are Reviewed by Admin.