ಅಗ್ಗದ ಅರಿವಿ ತಂದು
ಅಗ್ಗದ ಅರಿವಿ ತಂದು
ಹಿಗ್ಗಿ ಹೊಲಿಸಿದೆ ಅಂಗಿ
ಹೆಗ್ಗಣ ಒಯ್ತವ್ವ ತಂಗಿ ಈ ಅಂಗಿ.
ಅಗಣಿತ ವಿಷಯದ
ಆರುಗೇಣೀನ ಕವಚ
ಬಗಲಿನ ಬೆವರನು ಕುಡಿದು
ಸಿಗದೆ ಹೋಯಿತವ್ವ ತಂಗಿ ಈ ಅಂಗಿ.
ಬುದ್ದಿಗೇಡಿಗಳಾಗಿ
ನಿದ್ದಿ ಕೆಡಿಸಿಕೊಂಡು
ಎದ್ದು ನೋಡಲು ಕರ್ಮದ
ಗುದ್ದಿನೊಳಡಗಿತ್ತವ್ವ ತಂಗಿ ಈ ಅಂಗಿ.
ಕಳೆದೆನೀಪರಿ ರಾತ್ರಿ
ಬೆಳಗಾಗೋ ಸಮಯದಿ
ಚೆಲುವ ಶಿಶುನಾಳಾಧೀಶನು
ಉಳುವಿ ಕೊಟ್ಯಾನವ್ವ ತಂಗಿ ಈ ಅಂಗಿ.ಬಿದ್ದಿಯಬ್ಬೇ ಮುದುಕಿ
ಬಿದ್ದಿಯಬ್ಬೇ ಮುದುಕಿ
ಬಿದ್ದೀಯಬ್ಬೇ.
ನೀ ದಿನ ಹೋದಾಕಿ
ಇರು ಭಾಳ ಜೋಕಿ
ಬಿದ್ದೀಯಬೇ ಮುದುಕಿ ಬಿದ್ದೀಯಬೇ.
ಸದ್ಯಕಿದು ಹುಲುಗೂರ ಸಂತಿ
ಗದ್ದಲದೊಳಗ್ಯಾಕ ನಿಂತಿ?
ಬಿದ್ದು ಇಲ್ಲಿ ಒದ್ದಾಡಿದರ
ಎದ್ದು ಹ್ಯಾಂಗ ಹಿಂದಕ ಬರತಿ?
ಬುದ್ದಿಗೇಡಿ ಮುದುಕಿ ನೀನು ಬಿದ್ದೀಯಬೇ.
ಬುಟ್ಟಿಯಲ್ಲಿ ಪತ್ತಲ ಇಟ್ಟಿ
ಅದನು ಉಟ್ಟ ಹೊತ್ತೊಳು ಜೋಕಿ;
ಕೆಟ್ಟಗಂಟಿ ಚೌಡೇರು ಬಂದು
ಉಟ್ಟುದನ್ನೆ ಕದ್ದಾರ ಜೋಕಿ!
ಬುದ್ಧಿಗೇಡಿ ಮುದುಕಿ ನೀನು ಬಿದ್ದೀಯಬೇ.
ಶಿಶುನಾಳಾಧೀಶನ ಮುಂದೆ
ಕೊಸರಿ ಕೊಸರಿ ಹೋಗಬ್ಯಾಡ,
ಹಸನವಿಲ್ಲ ಹರಯ ಸಂದ
ಪಿಸುರು ಪಿಚ್ಚುಗಣ್ಣಿನ ಮುದುಕಿ
ಬುದ್ದಿಗೇಡಿ ಮುದುಕಿ ನೀನು ಬಿದ್ದೀಯಬೇ.
