ತಿರುಕನ ಕನಸು - ಮುಪ್ಪಿನ ಷಡಕ್ಷರಿ

 "ತಿರುಕನ ಕನಸು" - ಕವಿ: ಮುಪ್ಪಿನ ಷಡಕ್ಷರಿ


ಧರೆಯ ಭೋಗವನ್ನು ಮೆಚ್ಚಿ

ಹರನ ಮರೆತು ಕೆಡಲುಬೇಡ

ಧರೆಯ ಭೋಗ ಕನಸಿನಂತೆ ಕೇಳು ಮಾನವ ||ಪ||


ತಿರುಕನೋರ್ವನೂರಮುಂದೆ

ಮುರುಕು ಧರ್ಮಶಾಲೆಯಲ್ಲಿ

ಒರಗಿರುತ್ತಲೊಂದು ಕನಸ ಕಂಡನೆಂತೆನೆ |

ಪುರದ ರಾಜ ಸತ್ತನವಗೆ

ವರ ಕುಮಾರರಿಲ್ಲದಿರಲು

ಕರಿಯ ಕೈಗೆ ಕುಸುಮಮಾಲೆಯಿತ್ತು ಪುರದೊಳು ||1||


ನಡೆದು ಯಾರ ಕೊರಳಿನಲ್ಲಿ

ತೊಡರಿಸುವುದೊ ಅವರ ಪಟ್ಟ

ಕೊಡೆಯರನ್ನು ಮಾಳ್ಪೆವೆಂದು ಬಿಟ್ಟರಲ್ಲಿಯೆ |

ಒಡನೆ ತನ್ನ ಕೊರಳಿನಲ್ಲಿ

ತೊಡರಿಸಲ್ಕೆ ಕಂಡು ತಿರುಕ

ಪೊಡವಿಯಾಣ್ಮನಾದೆನೆಂದು ಹಿಗ್ಗುತಿರ್ದನು ||2||


ಪಟ್ಟವನ್ನು ಕಟ್ಟಿ ನೃಪರು

ಕೊಟ್ಟರವರ ಕನ್ಯೆಯರನು

ನೆಟ್ಟನವನು ರಾಜ್ಯವಾಳ್ದ ಕನಸಿನಲ್ಲಿಯೇ |

ಭಟ್ಟನಿಗಳ ಕೂಡಿ ನಲ್ಲ

ನಿಷ್ಟ ಸುಖದೊಳಿರಲವಂಗೆ

ಹುಟ್ಟಿ ಹೆಣ್ಣು ಗಂಡು ಮಕ್ಕಳಾದುವಾಗಲೇ ||3||


ಓಲಗದಲಿರುತ್ತ ತೊಡೆಯ

ಮೇಲೆ ಮಕ್ಕಳಾಡುತಿರಲು

ಲೀಲೆಯಿಂದ ಚಾತುರಂಗ ಬಲವನೋಡುತ |

ಲೋಲನಾಗಿ ನುಡಿದನಿನಿತು

ಕೇಳು ಮಂತ್ರಿ ಸುತರುಗಳಿಗೆ

ಬಾಲೆಯರನು ನೋಡಿ ಮದುವೆ ಮಾಡಬೇಕಲೈ ||4||


ನೋಡಿ ಬನ್ನಿರೆನಲು ಜೀಯ

ನೋಡಿಬಂದೆವೆನಲು ಬೇಗ

ಮಾಡು ಮದುವೆ ಮಂಟಪದೊಳು ಸಕಲ ಕಾರ್ಯವ |

ಗಾಢವಾಗೆ ಸಂಭ್ರಮಗಳು

ಮಾಡುತಿದ್ದ ಮದುವೆಗಳನು

ಕೂಡಿದಖಿಳ ರಾಯರೆಲ್ಲ ಮೆಚ್ಚುವಂದದಿ ||5||


ಧನದ ಮದವು ರಾಜ್ಯ ಮದವು

ತನುಜ ಮದವು ಯುವತಿ ಮದವು

ಜನಿತಮಾಗಿ ಕನಸಿನಲ್ಲಿ ಹಿಗ್ಗುತಿರ್ದನು |

ಅನಿತರೊಳಗೆ ನೃಪರ ಕಂಡು

ಮನೆಯ ಮುತ್ತಿದಂತೆಯಾಗಿ

ಕನಸು ಕಾಣುತಿರ್ದು ಹೆದರಿ ಕಣ್ಣ ತೆರೆದನು ||6||


ಮೆರೆಯುತಿರ್ದ ಭಾಗ್ಯವೆಲ್ಲ

ಹರಿದು ಹೋಯಿತೆಂದು ತಿರುಕ

ಮರಳಿ ನಾಚುತಿರ್ದ ಮರುಳನಂತೆಯಾಗಲೇ |

ಸಿರಿಯು ಕನಸಿನಂತೆಯೆಂದು

ಅರಿದು ಷಡಕ್ಷರಿಯ ವರನ

ಹರುಷದಿಂದ ಭಜಿಸು ನಿತ್ಯ ಸುಖವು ತಪ್ಪದು ||7||

Post a Comment

0 Comments
* Please Don't Spam Here. All the Comments are Reviewed by Admin.