ಕಾಲವಲ್ಲದ ಕಾಲ

ಕಾಲವಲ್ಲದ ಕಾಲ


ಧೋಮಳೆಯ ಸುರಿಸುತಿವೆ

ಮೋಡಗಳ ಅಣಕಿಸುತ ನಿನ್ನ ಕಣ್ಣು |

ಮನೆಯೊಳಗೆ ಇದ್ದರೂ ಮಳೆಯಲ್ಲಿ ತೋಯುತಿಹೆ

ನಿಟ್ಟಿಸುತ ತೆರೆದಿರುವ ಬಾಗಿಲನ್ನು ||


ಮೋಡ ಮುಸುಕಿದ ಇರುಳು ಆಗಸದ ತಾರೆಗಳು

ಕಾಣದಾಗಿವೆ ಮೇಲೆ ಬಾನಿನಲ್ಲಿ

ಮೋಡ ಮುಸುಕಿದ್ದರೂ ಮಳೆ ಸುರಿಯುತಿದ್ದರೂ

ಜೋಡಿ ನಕ್ಷತ್ರಗಳು ಕಣ್ಣಿನಲ್ಲಿ ||


ಹೊರಗೆ ತಣ್ಣಗೆ ಗಾಳಿ ನಡುಗುತಿವೆ ಮರ ಗಿಡಾ

ಒಳಗೆ ಬಿಸಿಯುಸಿರ ಹಬೆ ಹಾಯುತ್ತಿದೆ |

ಕಂಬನಿಯ ತನಿಮಳೆಗೆ ನೆಂದ ಮಾತಿನ ಹಕ್ಕಿ

ತುಟಿಯಂಚಿನಲಿ ತೊಪ್ಪ ತೋಯುತ್ತಿದೆ ||


ಸುರಿವ ಕಂಬನಿಯಲ್ಲಿ ಕಣ್ಣ ಕಾಡಿಗೆ ಕರಗಿ

ಕೆನ್ನೆಸರಪಳಿಯನ್ನು ಬರೆಯುತ್ತಿದೆ |

ಮಾಮರದ ಮೇಲೊಂದು ಕೂ ಎಂಬ ಕೋಗಿಲೆ

ಕೂಗು ಬಾಗಿಲವರೆಗು ಹಾಯುತ್ತಿದೆ ||

Post a Comment

0 Comments
* Please Don't Spam Here. All the Comments are Reviewed by Admin.