ತರವಲ್ಲ ತಗಿ ನಿನ್ನ ತಂಬೂರಿ

 ತರವಲ್ಲ ತಗಿ ನಿನ್ನ ತಂಬೂರಿ


ತರವಲ್ಲ ತಗಿ ನಿನ್ನ ತಂಬೂರಿ - ಸ್ವರ

ಬರದೆ ಬಾರಿಸದಿರು ತಂಬೂರಿ ;

ಸರಸ ಸಂಗೀತದ ಕುರುಹುಗಳರಿಯದೆ

ಬರದೆ ಬಾರಿಸದಿರು ತಂಬೂರಿ.



ಮದ್ದಲಿ ದನಿಯೊಳು ತಂಬೂರಿ - ಅದ

ತಿದ್ದಿ ನುಡಿಸಬೇಕೊ ತಂಬೂರಿ ;

ಸಿದ್ದ ಸಧಕರ ಸುವಿದ್ಯೆಗೆ ಒದಗುವ

ಬುದ್ದಿವಂತಗೆ ತಕ್ಕ ತಂಬೂರಿ.


ಬಾಳಬಲ್ಲವರಿಗೆ ತಂಬೂರಿ - ದೇವ

ಭಾಳಾಕ್ಷ ರಚಿಸಿದ ತಂಬೂರಿ ;

ಹೇಳಲಿ ಏನಿದರ ಹಂಚಿಕೆ ತಿಳಿಯದ

ತಾಳಗೇಡಿಗೆ ಸಲ್ಲ ತಂಬೂರಿ.


ಸತ್ಯ ಶರಧಿಯೊಳು ತಂಬೂರಿ - ನಿತ್ಯ

ಉತ್ತಮರಾಡುವ ತಂಬೂರಿ ;

ಬತ್ತೀಸರಾಗದ ಬಗೆಯನರಿಯದಂಥ

ಕತ್ತಿಗಿನ್ಯಾತಕೆ ತಂಬೂರಿ.


ಹಸನಾದ ಮ್ಯಾಳಕೆ ತಂಬೂರಿ - ಇದು

ಕುಶಲರಿಗೊಪ್ಪುವ ತಂಬೂರಿ.

ಶಿಶುನಾಳಧೀಶನ ಓದುಪುರಾಣದಿ

ಹಸನಾಗಿ ಬಾರಿಸೊ ತಂಬೂರಿ.

Post a Comment

0 Comments
* Please Don't Spam Here. All the Comments are Reviewed by Admin.