ಪೊನ್ನ

 ಪೊನ್ನ

     


            ಪೊನ್ನನು ಹಳೆಗನ್ನಡದ ಮೂವರು ರತ್ನತ್ರಯರಲ್ಲಿ ಒಬ್ಬನು. (ಇತರ ಇಬ್ಬರೆಂದರೆ ಪಂಪ ಹಾಗು ರನ್ನ). ಈತನ ಕಾಲ ಕ್ರಿ.ಶ.೯೫೦. ರಾಷ್ಟ್ರಕೂಟ ಚಕ್ರವರ್ತಿ ೩ನೆಯ ಕೃಷ್ಣನ ಆಸ್ಥಾನದಲ್ಲಿ(೯೩೯-೯೬೫) ಪೊನ್ನನು ಆಸ್ಥಾನ ಕವಿಯಾಗಿದ್ದನು. ಕನ್ನಡ ಹಾಗು ಸಂಸ್ಕೃತ ಗಳಲ್ಲಿ ಇವನಿಗೆ ಅಪಾರ ಪಾಂಡಿತ್ಯವಿದ್ದುದರಿಂದ ಈತನಿಗೆ ‘ಉಭಯ ಕವಿಚಕ್ರವರ್ತಿ’ ಎಂದು ಕರೆಯಲಾಗುತ್ತಿತ್ತು. ಈತನು ತನ್ನನ್ನು ‘ಕುರುಳ್ಗಳ ಸವಣ’ ಎಂದು ಕರೆದುಕೊಂಡಿದ್ದಾನೆ. ಆದುದರಿಂದ ಈತನು ಸನ್ಯಾಸಿಯಂತೆ ಇದ್ದನೆಂದು ಭಾವಿಸಬಹುದು.

ಪೊನ್ನನ ಕೃತಿಗಳು ಪೊನ್ನನು ೪ ಕಾವ್ಯಗಳನ್ನು ರಚಿಸಿದ್ದಾನೆಂದು ಹೇಳಲಾಗುತ್ತಿದೆ. ಲಭ್ಯವಿರುವ ಕಾವ್ಯಗಳು ಎರಡು:

  1. ಶಾಂತಿಪುರಾಣ
  2. ಜಿನಾಕ್ಷರಮಾಲೆ

  • ‘ಭುವನೈಕ ರಾಮಾಭ್ಯುದಯ’ ಹಾಗು ‘ಗತಪ್ರತ್ಯಾಗತ’ ಈ ಕಾವ್ಯಗಳು ಲಭ್ಯವಿಲ್ಲ.

  1. ಶಾಂತಿ ಪುರಾಣ -ಇದಕ್ಕೆ 'ಪುರಾಣ ನಾಮ ಚೂಡಾಮಣಿ'ಎಂಬ ಪರ್ಯಾಯನಾಮವಿದೆ. ೧೨ ಆಶ್ವಾಸಗಳಲ್ಲಿ ರಚನೆಯಾಗಿರುವ ಈ ಚಂಪೂ ಕಾವ್ಯ ೧೬ನೆಯ ತೀರ್ಥಂಕರನಾದ ಶಾಂತಿನಾಥನನ್ನು ಕುರಿತದ್ದು. ಈ ಕಾವ್ಯದಲ್ಲಿ ಪೊನ್ನನ ವಿದ್ವತ್ತು, ಪ್ರೌಢಿಮೆ, ಭಾಷೆ, ಛಂದಸ್ಸುಗಳ ಮೇಲೆ ಇರುವ ಹಿಡಿತ ಎದ್ದು ಕಾಣುತ್ತದೆ. ತೀರ್ಥಂಕರನಾಗಲಿರುವವನು ೬ನೆಯ ಜನ್ಮದಲ್ಲಿ 'ಅಪರಾಜಿತ'ನಾಗಿ ಹುಟ್ಟಿದಂದಿನಿಂದ ಕಥೆ ಆರಂಭವಾಗಿ, ಕೊನೆಯ ೩(೧೦-೧೨) ಆಶ್ವಾಸಗಳಲ್ಲಿ ಶಾಂತಿನಾಥನ ಸ್ವಂತ ಜೀವನವೂ, ಸಿದ್ಧಿಯೂ ವರ್ಣಿಸಲ್ಪಟ್ಟಿದೆ. ಜೈನಧರ್ಮದ ತತ್ವಗಳನ್ನು ಕವಿ ಕಾವ್ಯದುದ್ದಕ್ಕೂ ಪ್ರತಿಪಾದಿಸಿದ್ದಾನೆ.
  2. ಜಿನಾಕ್ಷರಮಾಲೆ-೩೬ ಕಂದಪದ್ಯಗಳಿರುವ ಕೃತಿ. 'ಕ'ಕಾರದಿಂದ ಹಿಡಿದು 'ಳ'ಕಾರದವರೆಗೂ ಕ್ರಮವಾಗಿ ಒಂದೊಂದು ಪದ್ಯಾಕ್ಷರ ಆರಂಭವಾಗುತ್ತದೆ.
  3. ಭುವನೈಕ ರಾಮಾಭ್ಯುದಯ-ಇದು ೧೪ ಆಶ್ವಾಸಗಳ ಚಂಪೂ ಕಾವ್ಯ. ಈ ಗ್ರಂಥವು ಲಭ್ಯವಿಲ್ಲವಾದ್ದರಿಂದ ಇದರ ಕಥಾವಸ್ತು ಚಕ್ರವರ್ತಿ ಕೃಷ್ನನ ಸಾಮಂತರಾಜ ಶಂಕರಗಂಡನ ಕುರಿತದ್ದೊ, ಅಥವಾ ರಾಮಕಥೆಯನ್ನು ಕುರಿತದ್ದೊ, ಇಲ್ಲವೇ ತನ್ನನ್ನು 'ಕೋದಂಡರಾಮ'ನೆಂದು ಕರೆದುಕೊಳ್ಳುತ್ತಿದ್ದ ಚೋಳರಾಜ ರಾಜಾದಿತ್ಯನ ಮೇಲೆ ಮುಮ್ಮಡಿಕೃಷ್ಣ ತಕ್ಕೋಲದಲ್ಲಿ ವಿಜಯ ಸಾಧಿಸಿದ ಕಥೆಯೋ ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ.

  • ಮಲ್ಲಪನ ಮಗಳಾದ 'ದಾನಚಿಂತಾಮಣಿ' ಅತ್ತಿಮಬ್ಬೆಯು ಶಾಂತಿ ಪುರಾಣ ಕೃತಿಯ ಸಾವಿರ ಪ್ರತಿಗಳನ್ನು ಮಾಡಿಸಿ, ಧರ್ಮಶ್ರದ್ಧೆಯುಳ್ಳವರಿಗೆ ಹಂಚಿದಳಂತೆ.


ಪೊನ್ನನಿಗಿದ್ದ ಬಿರುದುಗಳು: 

  • ಪೊನ್ನನನ್ನು ಕುರುಳ್ಗಳ್ ಸವಣ ಎಂದು ಕರೆಯುತ್ತಿದ್ದರು.
  • ಕವಿಚಕ್ರವರ್ತಿ ಎಂಬ ಬಿರುದನ್ನು ತನ್ನ ಅರಸನಿಂದ ಪಡೆದಿದ್ದನು.

Post a Comment

0 Comments
* Please Don't Spam Here. All the Comments are Reviewed by Admin.