ಶ್ರೀಪಾದರಾಜರು
- ಕಾಲ: ೧೩೮೯ - ೧೪೮೭
- ಹರಿದಾಸ ಪಂಥದ ಪ್ರಮುಖರಲ್ಲೊಬ್ಬರು ಹಾಗು ದ್ವೈತ ತತ್ವಶಾಸ್ತ್ರದ ಪ್ರತಿಪಾದಕರು.
- ಅಂಕಿತ: ರಂಗವಿಠಲ
ಜೀವನ:
- ಶ್ರೀಪಾದರಾಜರ ಜನ್ಮ ಸ್ಥಳ ಚನ್ನಪಟ್ಟಣ ತಾಲೂಕಿನಲ್ಲಿ ಅಬ್ಬೂರು. ಮೂಲ ಹೆಸರು ಲಕ್ಷ್ಮೀನಾರಾಯಣ. ತಂದೆಯ ಹೆಸರು ಶೇಷಗಿರಿಯಪ್ಪ. ತಾಯಿ ಗಿರಿಯಮ್ಮ.
- ಇವರು ಧ್ರುವರಾಜರ ಅವತಾರವಂತೆ ಮಾಧ್ವರ ವಿಶ್ವಾಸ. ಇವರ ಪ್ರಮುಖ ಶಿಷ್ಯರಾದ ವ್ಯಾಸತೀರ್ಥರು ಪ್ರಖ್ಯಾತ ಹರಿದಾರಸರಾದ ಪುರಂದರದಾಸರ ಮತ್ತು ಕನಕದಾಸರ ಗುರುಗಳು.
ರಂಗವಿಠಲ ಎಂಬ ಅಂಕಿತದಲ್ಲಿ ಅನೇಕ ದೇವರನಾಮಗಳನ್ನು ರಚಿಸಿದ್ದಾರೆ. ಇವರ ಜನಪ್ರಿಯವಾಗಿರುವ ದೇವರನಾಮಗಳು:
- ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ
- ಭೂಷಣಕೆ ಭೂಷಣ
- ಇಟ್ಟಾಂಗೆ ಇರುವೆನೋ ಹರಿಯೇ ನನ್ನ ದೊರೆಯೇ
- ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಶ್ರೀಪಾದರಾಜರ ಬೃಂದಾವನವಿದೆ.
ಶಿಕ್ಷಣ:
ಲಕ್ಷ್ಮೀನಾರಾಯಣನನ್ನು ಜತೆಯಲ್ಲಿ ಕರೆದು ಕೊಂಡು ಗುರುಗಳು ಸಂಚಾರ ಹೊರಟರು. ಅವನಿಗೆ ಏಳನೆಯ ವರ್ಷದಲ್ಲಿ ಉಪನಯನವನ್ನು ಮಾಡಿದರು. ಮುಂದೆ ವಿದ್ಯಾಭ್ಯಾಸವನ್ನು ಕೊಡಿಸಿದರು. ಲಕ್ಷ್ಮೀನಾರಾಯಣ ವೇದಶಾಸ್ತ್ರಗಳನ್ನು ಅಧ್ಯಯನ ಮಾಡಿದ. ಆ ಎಳೆಯ ವಯಸ್ಸಿಗೇ ಅವನ ಜ್ಞಾನ ಅಪಾರವಾಗಿತ್ತು. ಜೊತೆಗೆ ವೈರಾಗ್ಯವೂ ಅವನಲ್ಲಿ ನೆಲಸಿತ್ತು. ಗುರುಗಳಾದ ಸ್ವರ್ಣವರ್ಣತೀರ್ಥರು ತಾವೇ ಲಕ್ಷ್ಮೀ ನಾರಾಯಣನಿಗೆ ಸಂನ್ಯಾಸ ದೀಕ್ಷೆಯನ್ನು ಕೊಟ್ಟರು. ಅಲ್ಲಿಂದ ಮುಂದೆ ಲಕ್ಷ್ಮೀನಾರಾಯಣ ‘ಲಕ್ಷ್ಮೀನಾರಾಯಣ ಮುನಿ’ ಎನ್ನಿಸಿಕೊಂಡ. ಈ ತೇಜೋವಂತ ಬಾಲಮುನಿಗೆ ಇನ್ನೂ ಹೆಚ್ಚಿನ ಶಿಕ್ಷಣದ ಅಗತ್ಯವಿತ್ತು. ಆಗಿನ ಕಾಲದಲ್ಲಿ ಮಹಾ ಪಂಡಿತ ರೆನ್ನಿಸಿಕೊಂಡಿದ್ದವರು ಮಂತ್ರಾಲಯದ ಯತಿಗಳಾಗಿದ್ದ ಶ್ರೀ ವಿಭುದೇಂದ್ರತೀರ್ಥರು. ಬಾಲಮುನಿಯನ್ನು ಕರೆದು ಕೊಂಡುಬಂದು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಇವರಲ್ಲಿ ಬಿಡಲಾಯಿತು. ಸಕಲ ವೇದ ಶಾಸ್ತ್ರಗಳನ್ನೂ ಲಕ್ಷ್ಮೀ ನಾರಾಯಣ ಮುನಿ ಅಧ್ಯಯನ ಮಾಡಿ ಸಂಪೂರ್ಣ ವಾಗಿ ತಿಳಿದುಕೊಂಡ. ತರ್ಕ, ನ್ಯಾಯಗಳಲ್ಲಿ ಗಟ್ಟಿಗನಾದ.
ಶ್ರೀಪಾದರಾಜರು
ಒಮ್ಮೆ ವಿಭುದೇಂದ್ರತೀರ್ಥರು ತಮ್ಮ ಶಿಷ್ಯರೊಡನೆ ಸಂಚಾರಮಾಡುತ್ತಾ ಕೊಪ್ರ ಎಂಬ ಗ್ರಾಮಕ್ಕೆ ಬಂದರು. ಕೊಪ್ರ ಎನ್ನುವುದು ಈಗಿನ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿದೆ. ಇದೇ ಹೊತ್ತಿಗೆ ಸರಿಯಾಗಿ ಉತ್ತರಾದಿ ಮಠದ ಶ್ರೀಗಳಾದ ಶ್ರೀ ರಘುನಾಥ ತೀರ್ಥರು ತಾವೂ ಸಂಚಾರ ಮಾಡುತ್ತಾ ಅದೇ ಕೊಪ್ರ ಗ್ರಾಮಕ್ಕೆ ಬಂದರು. ಇಬ್ಬರು ಯತಿಗಳ ಸಮಾಗಮವಾಯಿತು. ಉಭಯ ಕುಶಲೋಪರಿಗಳು ಜರುಗಿದವು. ಶ್ರೀ ರಘುನಾಥತೀರ್ಥರ ಕಣ್ಣುಗಳು ಅಲ್ಲಿಯೇ ತೇಜಃಪುಂಜನಾಗಿ ಕಾಣಿಸುತ್ತಿದ್ದ ಬಾಲಮುನಿಯ ಮೇಲೆ ಹರಿದವು.
‘ಹೊತ್ತನ್ನು ನೋಡಿ, ನಮ್ಮನ್ನು ನೋಡಿ, ದನಗಳನ್ನು ನೋಡಿ.’
“ಏನೇನು ಓದಿದ್ದೀರಿ?” ಎಂದು ಕುತೂಹಲಕ್ಕಾಗಿ ಪ್ರಶ್ನೆ ಹಾಕಿದರು. ಪ್ರಶ್ನೆ ಕೇಳಿದ್ದೆ ತಡ ಬಾಲಮುನಿ, ಮಧ್ವಾಚಾರ್ಯರ ಗ್ರಂಥಗಳನ್ನೂ ಸುಧಾ ವ್ಯಾಖ್ಯಾನ ವನ್ನೂ ನಿರರ್ಗಳವಾಗಿ ಒಪ್ಪಿಸಿದನಲ್ಲದೆ, ತನ್ನ ಶಾಸ್ತ್ರ ಪಾಂಡಿತ್ಯವನ್ನೂ ನಿವೇದನೆ ಮಾಡಿದ. ಬಾಲಕನ ಮೇಧಾಶಕ್ತಿಯನ್ನೂ ವಿದ್ಯಾಪ್ರೌಢಿಮೆಯನ್ನೂ ಕಂಡು ರಘುನಾಥತೀರ್ಥರು ತಲೆದೂಗುತ್ತಾ ಮತ್ತೆಮತ್ತೆ ಪ್ರಶಂಸೆಗಳನ್ನು ಮಾಡಲು ಆರಂಭಿಸಿದರು.
ತನಗಿಂತ ಹಿರಿಯರೂ ಜ್ಞಾನಸಂಪನ್ನರೂ ಆದ ಯತಿಗಳು ತನ್ನನ್ನು ಈ ರೀತಿ ಹೊಗಳುತ್ತಿರುವುದನ್ನು ಕಂಡು ಬಾಲಮುನಿಗೆ ತೀರಾ ಸಂಕೋಚವೆನಿಸಿತು. ವಿನಯದಿಂದ ಕೈಜೋಡಿಸಿ, “ತಾವು ಮಹಾ ಜ್ಞಾನಿಗಳು. ಮಹಾ ಸಂಸ್ಥಾನವೊಂದರ ಅಪತಿಗಳು. ನಾನೋ ಕೇವಲ ಬಾಲಸಂನ್ಯಾಸಿ. ತಾವು ಶ್ರೀಪಾದಂಗಳವರು, ನನ್ನಂಥವನ ಗುಣಕಥನ ಮಾಡಬಾರದು” ಎಂದರು.
ಶ್ರೀರಘುತೀರ್ಥರಿಗೆ ಬಾಲಸಂನ್ಯಾಸಿಯ ವಿನಯ ಸೌಜನ್ಯಗಳು ತುಂಬ ಮೆಚ್ಚುಗೆಯಾದವು. ಬಹು ಸಂತೋಷದಿಂದ,
“ನಾವು ಶ್ರೀಪಾದಂಗಳವರಾದರೆ, ನೀವು ಶ್ರೀಪಾದ ರಾಜರು” ಎಂದು ಹೇಳಿದರು.
ಅಂದಿನಿಂದ ಲಕ್ಷ್ಮೀನಾರಾಯಣ ಮುನಿ ‘ಶ್ರೀಪಾದರಾಜರು’ ಎಂದೇ ಪ್ರಖ್ಯಾತರಾದರು.
ಶ್ರೀ ವಿಭುದೇಂದ್ರತೀರ್ಥರಲ್ಲಿ ಶ್ರೀಪಾದರಾಜರ ವಿದ್ಯಾಭ್ಯಾಸ ಮುಗಿದಿತ್ತು. ಗುರುಕಾಣಿಕೆಯನ್ನು ಸಲ್ಲಿಸಿ ಶ್ರೀರಂಗದಲ್ಲಿದ್ದ ತಮ್ಮ ಗುರುಗಳಾದ ಸ್ವರ್ಣವರ್ಣ ತೀರ್ಥರ ಬಳಿಗೆ ಹಿಂದಿರುಗಿದರು.
ಪೀಠ ಬೆಳಗಲು:
ಸ್ವರ್ಣವರ್ಣರ ಆನಂದಕ್ಕಂತೂ ಪಾರವೇ ಇಲ್ಲ. ತಾವು ಕರೆದುಕೊಂಡು ಹೋಗಿ ಬಿಟ್ಟ ಲಕ್ಷ್ಮೀನಾರಾಯಣ ಬಾಲಮುನಿ ಇದೀಗ ‘ಶ್ರೀಪಾದರಾಜರು’ ಎಂಬ ಬಿರುದನ್ನು ಪಡೆದು ಬಂದಿದ್ದಾನೆ. ವಿದ್ಯೆ, ವಿನಯ, ವೈರಾಗ್ಯ, ಗಾಂಭೀರ್ಯಗಳ ತೇಜಸ್ಸಿನಿಂದ ಬೆಳಗುತ್ತಿದ್ದಾನೆ. ಸ್ವರ್ಣವರ್ಣರು ಶ್ರೀಪಾದರಾಜನನ್ನು ಕಂಡು ಉಬ್ಬಿ ಹೋದರು.
ಈ ಹೊತ್ತಿಗೆ ಅವರಿಗೂ ತುಂಬ ವಯಸ್ಸಾಗಿತ್ತು. ತಮ್ಮ ಅನಂತರ ಪೀಠಕ್ಕೆ ಬರಲು ಇಂಥ ಶಿಷ್ಯನಿಗಿಂತ ಬೇರೊಬ್ಬರುಂಟೆ! ಶ್ರೀಪಾದರಾಜರಿಗೇ ತಮ್ಮ ಸಂಸ್ಥಾನ ಸಲ್ಲತಕ್ಕದ್ದೆಂದು ಸ್ವರ್ಣವರ್ಣರು ನಿಶ್ಚಯಿಸಿಕೊಂಡರು. ಶ್ರೀಪಾದರಾಜರಿಗೇ ತಮ್ಮ ಪೀಠವನ್ನು ಅರ್ಪಿಸ ಬೇಕೆಂದು ಅವರಿಗೆ ಕನಸು ಬೇರೆ ಬಿದ್ದಿತ್ತಂತೆ.
ಸ್ವರ್ಣವರ್ಣರು ಶ್ರೀಪಾದರಾಜರ ತಂದೆತಾಯಿಗಳಿಗೆ ಹೇಳಿಕಳುಹಿಸಿದರು, ಬರಮಾಡಿಕೊಂಡರು. ತಮ್ಮ ಮನಸ್ಸಿ ನಲ್ಲಿರುವ ನಿರ್ಧಾರವನ್ನು ತಿಳಿಯಪಡಿಸಿದರು. ಎಲ್ಲರ ಒಪ್ಪಿಗೆ ಪಡೆದು ಸಂತೋಷದಿಂದ ತಮ್ಮ ಪೀಠದ ಮೇಲೆ ಶ್ರೀಪಾದರಾಜರನ್ನು ಕೂಡಿಸಿ ಪಟ್ಟಾಭಿಷೇಕ ನಡೆಸಿದರು.
ಪೀಠಕ್ಕೆ ಬಂದಾಗ ಶ್ರೀಪಾದರಾಜರಿಗೆ ವಯಸ್ಸು ಇನ್ನೂ ಹದಿನಾಲ್ಕು ವರ್ಷ. ಮುಂದೆ ಸ್ವಲ್ಪಕಾಲದಲ್ಲಿ ಸ್ವರ್ಣವರ್ಣತೀರ್ಥರು ಕಾಲವಾದರು. ಶ್ರೀರಂಗಕ್ಷೇತ್ರಕ್ಕೆ ಹೋದವರು ಇಂದಿಗೂ ಸ್ವರ್ಣವರ್ಣರ ವೃಂದಾವನ ವನ್ನು ಅಲ್ಲಿ ಕಾಣಬಹುದು.
ಎಳೆಯ ಬಾಲಕನೊಬ್ಬನಲ್ಲಿದ್ದ ವಿಶೇಷ ಪ್ರತಿಭೆಯನ್ನು ಗುರುತಿಸಿ, ಅವನನ್ನು ಸಕಲಶಾಸ್ತ್ರ ಪಾರಂಗತನನ್ನಾಗಿ ಮಾಡಿ ಕನ್ನಡದೇಶ ಮತ್ತು ಭಾಷೆಗೆ ಶ್ರೀಪಾದರಾಜನೆಂಬ ಮಹಿಮಾನ್ವಿತನನ್ನು ಕೊಟ್ಟ ಶ್ರೇಯಸ್ಸು ಸ್ವರ್ಣವರ್ಣ ತೀರ್ಥರಿಗೆ ಸಲ್ಲುತ್ತದೆ.
ದಾಸಸಾಹಿತ್ಯದ ಅರುಣೋದಯ
ಶ್ರೀಪಾದರಾಜರು ತಮ್ಮ ಅಪಾರ ಮಹಿಮೆ, ವಿದ್ವತ್ತುಗಳಿಂದ ಶೋಭಿಸುತ್ತಾ ತಮ್ಮ ತಾಯ್ನುಡಿಯಾದ ಕನ್ನಡದಲ್ಲಿ ನೂರಾರು ಕೀರ್ತನೆಗಳನ್ನು ರಚನೆ ಮಾಡಿದರು. ಕರ್ನಾಟಕದ ನೆಲದಲ್ಲಿ ಧರ್ಮಜಾಗೃತಿ ಯನ್ನು ಉಂಟುಮಾಡಿದರು. ತಮ್ಮ ಕೀರ್ತನೆಗಳನ್ನು ಸಂಗೀತಬದ್ಧವಾಗಿ ರಚಿಸಿದರಲ್ಲದೆ, ತಾವೇ ಕಾಲಿಗೆ ಗೆಜ್ಜೆಗಳನ್ನು ಕಟ್ಟಿಕೊಂಡು, ತಾಳಗಳನ್ನು ಹಾಕುತ್ತಾ ನರ್ತನ ಮಾಡಿದರು. ರಾಗ, ತಾಳ, ಲಯಗಳಿಂದ ತುಂಬಿದ ಶ್ರೀಪಾದರಾಜರ ಭಗವನ್ನಾಮ ಸಂಗೀತ ಕೃತಿಗಳು ನಮ್ಮ ಕನ್ನಡ ಭಾಷೆಗೆ ಒಂದು ವಿಶೇಷ ಕೊಡುಗೆ. ‘ಶ್ರೀಪಾದ ರಾಜರಿಂದ ದಾಸಸಾಹಿತ್ಯದ ಅರುಣೋದಯ’ ಎಂದೇ ನಮ್ಮ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕರೆಯಲಾಗಿದೆ.
ನಮ್ಮ ಭರತಖಂಡದಲ್ಲಿ ಭಕ್ತಿಮಾರ್ಗವೆನ್ನುವುದು ಬಹು ದೊಡ್ಡ ಸಂಪ್ರದಾಯ. ನಮ್ಮ ಕರ್ನಾಟಕ ಭೂಮಿ ಯಲ್ಲಿಯೇ ಅದು ಜನಿಸಿತ್ತೆನ್ನುವುದು ನಮಗೆಲ್ಲ ಹೆಮ್ಮೆ. ಮಧ್ವಾಚಾರ್ಯರು ಇದರ ಆದಿ ಪ್ರವರ್ತಕರು. ಅವರನ್ನೇ ಗುರುವಾಗಿಟ್ಟುಕೊಂಡು ವೈಷ್ಣವ ದಾಸಪಂಥ ಕರ್ನಾಟಕದಲ್ಲೆಲ್ಲ ಭಕ್ತಿ ಪ್ರಚಾರ ಮಾಡಿತು. ಇದರ ಪ್ರಭಾವ ಉತ್ತರದ ಬಂಗಾಳ ದೇಶದವರೆಗೂ ವ್ಯಾಪಿಸಿತು. ಭಕ್ತಿ ಸಂಪ್ರದಾಯ ಎಂದರೇನು? ಭಗವಂತನಲ್ಲಿ ಗಾಢವಾದ ಪ್ರೇಮವೇ ಭಕ್ತಿ. ಹೃದಯದಲ್ಲಿ ಉಕ್ಕಿ ಬರುವಂತಹ ಭಾವನಾಲಹರಿಗಳನ್ನು ಯಾವ ಮುಚ್ಚು ಮರೆಯಿಲ್ಲದೆಯೇ ಭಗವಂತನಲ್ಲಿ ತೋಡಿಕೊಳ್ಳ ಲಾಗುತ್ತದೆ. ಅತ್ಯುತ್ಕಟ ಭಾವನೆಗಳು, ಸರಳವಾದ ಹೃದಯ, ಪ್ರೇಮ ಪುರಸ್ಸರವಾದ ಮಾತುಗಳು – ಇವು ಭಕ್ತಿಮಾರ್ಗದವರ ಲಕ್ಷಣ. ಈ ಭಕ್ತಿ ಸಂಪ್ರದಾಯ ನಮ್ಮ ಕನ್ನಡ ದೇಶದಲ್ಲಿ ೧೩ರಿಂದ ೧೮ನೆಯ ಶತಮಾನ ಗಳವರೆಗೂ ತುಂಬು ಪ್ರವಾಹದಂತೆ ಹರಿ ಯಿತು. ಲೋಕ ಕಲ್ಯಾಣದೃಷ್ಟಿಯೇ ಇವರದು. ಇವರನ್ನು ‘ದಾಸಕೂಟದವರು’ ಎಂದು ಕರೆಯ ಲಾಯಿತು. ಇವರ ಕೃತಿಗಳನ್ನೆಲ್ಲ ‘ದಾಸಸಾಹಿತ್ಯ’ ಎಂದು ಹೇಳಲಾಯಿತು. ಕನ್ನಡನಾಡಿನ ಪುರಂದರರು ತ್ಯಾಗರಾಜರಿಗಿಂತಲೂ ಬಹಳ ಹಿಂದಿನವರು. ತ್ಯಾಗರಾಜರ ತಾಯಿ ತಮ್ಮ ಮನೆಯಲ್ಲಿ ಪುರಂದರರ ಕೀರ್ತನೆಗಳನ್ನು ಹಾಡುತ್ತಿದ್ದರಂತೆ. ಪುರಂದರದಾಸರಿ ಗಿಂತಲೂ ಹೆಚ್ಚು ಹಿಂದಿನವರು ಶ್ರೀಪಾದರಾಜರು.
ನಮಸ್ತೇ ಶ್ರೀಪಾದರಾಜಾಯ
ನಮಸ್ತೇ ವ್ಯಾಸಯೋಗಿನೇ |
ನಮಃ ಪುರಂದರಾರ್ಯಾಯ
ವಿಜಯಾರ್ಯಾ ಯತೇ ನಮಃ ||
ಎಂದೇ ಶ್ರೀಪಾದರಾಜರಿಗೆ ಆದ್ಯಪಟ್ಟವನ್ನು ಕಟ್ಟಲಾ ಗಿದೆ. ದಾಸ ಸಾಹಿತ್ಯದಲ್ಲಿ ಪ್ರಸಿದ್ಧವಾದ ವ್ಯಾಸತೀರ್ಥರು, ಪುರಂದರದಾಸರು, ಕನಕದಾಸರು, ವಿಜಯದಾಸರು, ಜಗನ್ನಾಥದಾಸರು – ಹೀಗೆ ಇವರೆಲ್ಲರಿಗೂ ಗುರು ಸಮಾನರಾಗಿ ಇರತಕ್ಕವರು ಶ್ರೀಪಾದರಾಜರು. ದಾಸ ಸಾಹಿತ್ಯದ ಪಿತಾಮಹರೆಂದೇ ಅವರನ್ನು ಕರೆಯಲಾಗಿದೆ.
ತಿಳಿಗನ್ನಡದಲ್ಲಿ ಕೃತಿಗಳು
ತಮ್ಮ ಗುರುಗಳಾದ ಸ್ವರ್ಣವರ್ಣತೀರ್ಥರ ಜತೆಯಲ್ಲಿ ಹಲವು ವರ್ಷಗಳ ಕಾಲವೇ ಶ್ರೀಪಾದರಾಜರು ತಮಿಳು ದೇಶದ ಶ್ರೀರಂಗದಲ್ಲಿ ಇದ್ದರಷ್ಟೆ. ತಮಿಳರು ಶ್ರೀವೈಷ್ಣವ ಪ್ರಬಂಧಗಳನ್ನು ತಮ್ಮ ತಾಯಿನುಡಿಯಾದ ತಮಿಳು ಭಾಷೆಯಲ್ಲಿಯೇ ಅಕ್ಕರೆಯಿಂದ ಸಂಗೀತ ಸಾಹಿತ್ಯಬದ್ಧವಾಗಿ ರಚಿಸುತ್ತಿದ್ದುದನ್ನೂ ಹಾಡುತ್ತಿದ್ದುದನ್ನೂ ಶ್ರೀಪಾದರಾಜರು ಕಂಡಿದ್ದರು. ಸಾಮಾನ್ಯ ಜನರ ಹೃದಯವನ್ನು ನೇರವಾಗಿ ಮುಟ್ಟಲು ಮಾತೃಭಾಷೆಗಿಂತ ಬೇರೆ ಸಾಧನವೇ ಇಲ್ಲವೆಂಬುದನ್ನು ಅವರು ಅರಿತಿ ದ್ದರು. ಶ್ರೀವೈಷ್ಣವ ಪ್ರಬಂಧಗಳಂತೆಯೇ ತಮ್ಮ ಸ್ವಭಾಷೆ ಕನ್ನಡ ದಲ್ಲಿಯೂ ಕೃತಿರಚನೆಗಳನ್ನು ಮಾಡಬೇಕೆಂದು ಶ್ರೀಪಾದ ರಾಜರು ನಿರ್ಧರಿಸಿದರು. ಅದುವರೆಗೂ ದೊಡ್ಡದೊಡ್ಡ ವಿಷಯಗಳನ್ನು ಹೇಳಬೇಕಾದರೆ ಸಂಸ್ಕೃತ ಭಾಷೆಯೊಂದೇ ಯೋಗ್ಯತೆಯುಳ್ಳದ್ದೆಂದು ಪಂಡಿತರೂ ಸಾಹಿತ್ಯ ರಚನ ಕಾರರೂ ನಂಬಿದ್ದರು. ಆದರೆ ಶ್ರೀಪಾದರಾಜರು ತಾವು ಸಂಸ್ಕೃತದಲ್ಲಿ ಘನ ಪಂಡಿತರಾಗಿದ್ದರೂ ‘ವಾಗ್ವಜ್ರ’ ಎಂಬ ತಮ್ಮ ಕೃತಿಯನ್ನು ಸಂಸ್ಕೃತ ಭಾಷೆಯಲ್ಲೆ ರಚಿಸಿದ್ದರೂ ಚತುಶ್ಶಾಸ್ತ್ರಗಳನ್ನು ಓದಿದವರಾಗಿದ್ದರೂ ತಮ್ಮ ಅಂತರಂಗದ ಭಾವನಾಲಹರಿಗಳಿಗೆ, ಭಗವಂತನ ಭಕ್ತಿಗೆ ತಮ್ಮ ತಾಯ್ನುಡಿಯಾದ ಕನ್ನಡವೇ ಯೋಗ್ಯ, ಸರ್ವಶ್ರೇಷ್ಠ ವೆಂದು ತಿಳಿದರು. ತಮ್ಮ ಮಾತೃಭಾಷೆಗೆ ಶ್ರೀಪಾದರಾಜರು ಸಲ್ಲಿಸಿದಂತಹ ಗೌರವ, ಮಹತ್ವದ ಕಾಣಿಕೆ ಇದು. ಶ್ರೀಪಾದರಾಜ ಯತಿಗಳನ್ನು ನಾವು ಸ್ಮರಿಸಿಕೊಳ್ಳುವುದು ಕನ್ನಡ ಭಾಷೆಗೆ ಅವರು ಸಲ್ಲಿಸಿದಂತಹ ಈ ಪ್ರೀತಿ ಅಭಿಮಾನಗಳಿಂದ.
ಶ್ರೀಪಾದರಾಜರು ತಮ್ಮ ಗುರುಗಳಾದ ಸ್ವರ್ಣವರ್ಣ ತೀರ್ಥರು ಕಾಲವಾದ ಮೇಲೆ ಶ್ರೀರಂಗ ದಿಂದ ನೇರವಾಗಿ ಮುಳಬಾಗಲು ಮಠಕ್ಕೆ ಬಂದರು. ಮುಳಬಾಗಲು ಕೋಲಾರ ಜಿಲ್ಲೆಯಲ್ಲಿದೆ. ಅಂದು ಈ ಮುಳಬಾಗಲು ಸಾಳ್ವ ನರಸಿಂಹನ ರಾಜ್ಯಾಕಾರಕ್ಕೆ ಸೇರಿತ್ತು. ಮಧ್ವಾಚಾರ್ಯರ ನೇರ ಶಿಷ್ಯರಲ್ಲಿ ಒಬ್ಬ ರಾಗಿದ್ದ ಪದ್ಮನಾಭತೀರ್ಥ ಎಂಬವರು ಈ ಮುಳ ಬಾಗಲು ಮಠವನ್ನು ಸ್ಥಾಪಿಸಿದವರು. ಶ್ರೀಪಾದರಾಜರ ಗುರುಗಳಾಗಿದ್ದ ಸ್ವರ್ಣವರ್ಣತೀರ್ಥರು ಈ ಮಠದ ಯತಿಗಳಲ್ಲಿ ಎಂಟನೆಯವರಾಗಿದ್ದರು. ಮುಂದೆ ಮುಳ ಬಾಗಲು ಮಠವೇ ಶ್ರೀಪಾದರಾಜರ ಸಮಸ್ತ ಕಾರ್ಯ ಕ್ಷೇತ್ರವಾಯಿತು. ಉನ್ನತ ವಿದ್ಯಾಪೀಠವೊಂದನ್ನು ಅವರು ಇಲ್ಲಿ ಸ್ಥಾಪನೆ ಮಾಡಿದರು. ತತ್ತ್ವಶಾಸ್ತ್ರ, ಸಂಗೀತ ಶಾಸ್ತ್ರ, ನೃತ್ಯ ಶಾಸ್ತ್ರಗಳನ್ನು ಶ್ರೀಪಾದರಾಜರು ಚೆನ್ನಾಗಿ ಬಲ್ಲವ ರಾಗಿದ್ದರು. ಸಂಸ್ಕೃತ ವಿದ್ಯಾಭ್ಯಾಸಕ್ಕೂ ಸಂಗೀತ ಕಲಾ ಭ್ಯಾಸಕ್ಕೂ ಮುಳಬಾಗಿಲು ಪ್ರಸಿದ್ಧ ಕೇಂದ್ರವಾಯಿತು.
ಕೀರ್ತನೆಗಳು
ಅವರು ಧರ್ಮಪೀಠವೊಂದರಲ್ಲಿ ಕುಳಿತಿದ್ದರು, ಮಹಾ ಮಹಿಮರಾಗಿದ್ದರು. ಮಾತ್ರವಲ್ಲ, ವಿಶೇಷವಾಗಿ ಕನ್ನಡ ನಾಡಿನಲ್ಲಿ, ಕನ್ನಡ ಭಾಷೆಯಲ್ಲಿ ಒಂದು ಹೊಸ ಬಗೆಯ ಸಾಹಿತ್ಯ ಪರಂಪರೆಯನ್ನೆ ಸೃಷ್ಟಿಸಲು ಅವರು ಆದಿಪುರುಷರಾದರು ಎನ್ನುವುದು ತುಂಬ ಮುಖ್ಯ ಸಂಗತಿ. ಕನ್ನಡದಲ್ಲಿ ಸಂಗೀತಕೃತಿ ರಚನೆಗೆ ಅವರೇ ಸೂರ್ತಿದಾಯಕರಾದರು. ಇವರಿಗೂ ಹಿಂದೆ ನರಹರಿ ತೀರ್ಥ ಎಂಬುವರಿದ್ದರು. ಅವರು ಕೂಡ ಕನ್ನಡದಲ್ಲಿ ಕೀರ್ತನೆಗಳನ್ನು ಮಾಡಿದ್ದಾರೆ. ಆದರೆ ನಮಗೆ ಸಿಕ್ಕಿರುವುದು ಕವಲ ಒಂದೋ ಎರಡೋ ಅಷ್ಟೆ. ಶಾಸ್ತ್ರೀಯ ಸಂಗೀತದಲ್ಲಿ ಪಲ್ಲವಿ, ಅನುಪಲ್ಲವಿಗಳನ್ನು ಇಟ್ಟುಕೊಂಡು ವ್ಯಾಪಕವಾಗಿ ಕನ್ನಡದಲ್ಲಿ ಕೃತಿ ರಚನೆ ಮಾಡಿದ ಮೊದಲ ಕೀರ್ತಿ ಶ್ರೀಪಾದರಾಜರಿಗೇ ಸಲ್ಲ ಬೇಕು. ಅದರಿಂದಲೇ ಶ್ರೀಪಾದ ರಾಜರ ಹಸರು ಅಷ್ಟೊಂದು ಗಮನಾರ್ಹವಾಗಿರುವುದು. ‘ರಂಗವಿಠ್ಠಲ’ ಎಂಬ ಅಂಕಿತವನ್ನಿಟ್ಟುಕೊಂಡು ನೂರಾರು ಕೀರ್ತನೆ ಗಳನ್ನು ಶ್ರೀಪಾದರಾಜರು ಮಾಡಿದ್ದಾರೆ. ಸರಳವಾದ ಶೈಲಿ, ಮೃದುಮೃದುವಾದ ಭಾಷೆ, ಭಕ್ತಿರಸದಿಂದ ತುಂಬಿತುಳು ಕಾಡುತ್ತಿರುವ ಅವರ ಕೀರ್ತನೆಗಳು ಕೇಳಲು ತುಂಬ ಮನೋಹರವಾಗಿರುತ್ತವೆ. ರಾಗದ ಹೆಸರುಗಳನ್ನು ಸೇರಿಸಿಕೊಂಡೇ ಅವರು ರಚಿಸಿರುವ ಕೀರ್ತನೆಯೊಂದು, ಹೇಗೆ ಸಂಗೀತದಲ್ಲಿ ಅವರ ಜ್ಞಾನ ಅಪಾರವಾಗಿತ್ತು ಎಂಬುದನ್ನು ಸೂಚಿಸುತ್ತದೆ. ಹಾಡಿ ಕೊಳ್ಳಲು ಈ ಕೀರ್ತನೆ ತುಂಬ ಇಂಪಾಗಿರುವುದರಿಂದ ಅದನ್ನಿಲ್ಲಿ ಕೊಡಲಾಗಿದೆ.
ಲಾಲಿ ಗೋವಿಂದ ಲಾಲಿ, ಕೌಸಲ್ಯ
ಬಾಲ ಶ್ರೀರಾಮ ಲಾಲೀ
ಲಾಲಿ ಮುನಿವಂದ್ಯಲಾಲಿ, ಜಾನಕೀ
ರಮಣ ಶ್ರೀರಾಮ ಲಾಲೀ || ಪ ||
ಪಲ್ಲವಾಧರೆಯರೆಲ್ಲ ಈ ಶಿಶುವ
ತುಲ್ಯ ವರ್ಜಿತವೆನುತಲಿ
ಸಲ್ಲಲಿತ ಗಾನದಿಂದ ತೂಗಿದರು
ಕಲ್ಯಾಣಿ ರಾಗದಿಂದ ||
ಆನಂದ ಸದನದೊಳಗೆ ಗೋಪಿಯರು
ಆ ನಂದಸುತನ ಕಂಡು
ಆನಂದಭರಿತರಾಗಿ ತೂಗಿದರು
ಆನಂದ ಭೈರವಿಂದ ||
ದೇವಾದಿದೇವನೆಂದು ಈ ಶಿಶುವು
ಭಾವನಾತೀತನೆಂದು
ದೇವ ಗಂಧರ್ವರ್ಪಾಡಿ ತೂಗಿದರು
ದೇವಗಾಂಧಾರದಿಂದ ||
ಕಾವ್ಯಗಳು
ಕೇವಲ ಬಿಡಿ ಗೀತಗಳನ್ನೆ ಅಲ್ಲದೆ ಶ್ರೀಪಾದರಾಜರು ಗೋಪಿಗೀತಾ, ವೇಣುಗೀತಾ, ಭ್ರಮರಗೀತಾ, ಶ್ರೀ ಲಕ್ಷ್ಮೀ ನರಸಿಂಹ ಪ್ರಾರ್ದುಭಾದಂಡಕ, ರುಕ್ಮಿಣೀ-ಸತ್ಯಭಾಮ ವಿಲಾಸ ಮತ್ತು ಮಧ್ವನಾಮ ಎಂಬೆಲ್ಲ ಕನ್ನಡ ಕಾವ್ಯಗಳನ್ನು ರಚಿಸಿದ್ದಾರೆ. ತಾಯಿ ಯಶೋದೆ ಹೇಗೆ ತನ್ನ ಮಗನಾದ ಬಾಲಕೃಷ್ಣನನ್ನು ಪರಿಪರಿಯಿಂದ ಕೂಗಿರ ಬಹುದು, ತನ್ನ ತಾಯಿ ಹೃದಯದ ಪ್ರೀತಿಯನ್ನು ಹರಿಸಿರಬಹುದು ಎಂಬೆಲ್ಲ ಭಾವಗಳನ್ನು ತುಂಬಿ ಕೊಂಡು ಶ್ರೀಪಾದರಾಜರು ವಾತ್ಸಲ್ಯಭಾವದಿಂದ ಹಲವು ಕೀರ್ತನೆಗಳನ್ನು ರಚಿಸಿದ್ದಾರೆ. ಹಾಗೆಯೇ ಮಧುರ ಭಾವ, ಸಮರ್ಪಣಭಾವಗಳುಳ್ಳ ಕೀರ್ತನೆಗಳನ್ನೂ ಮಾಡಿದ್ದಾರೆ. ಒಮ್ಮೆ ದೇವರಲ್ಲಿ ದೈನ್ಯವಾಗಿ ನಡೆದು ಕೊಳ್ಳುವುದು, ಇನ್ನೊಮ್ಮೆ ದೇವರೊಡನೆ ಸರಸವಾಡು ವುದು ಮತ್ತೊಮ್ಮೆ ದೇವರನ್ನು ನಿಂದಿಸಿ ಸ್ತುತಿ ಮಾಡು ವುದು, ಇನ್ನೊಮ್ಮೆ ದೇವರ ಮಹಿಮಾತಿಶಯಗಳನ್ನು ವರ್ಣಿಸುವುದು – ಹೀಗೆ ಹತ್ತಾರು ರೀತಿ ತಮ್ಮ ಅಂತರಂಗ ಭಾವನೆಗಳನ್ನು ಶ್ರೀಪಾದರಾಜರು ತಮ್ಮ ಕೃತಿಗಳಲ್ಲಿ ತೋಡಿಕೊಂಡಿದ್ದಾರೆ. ಅನೇಕ ಉಗಾಭೋಗಗಳನ್ನು ಅವರು ರಚಿಸಿದರು. ಗೀತಗೋವಿಂದದ ಶ್ಲೋಕಗಳನ್ನು ಸಂಗೀತ ರೂಪದಲ್ಲಿ ಕನ್ನಡದಲ್ಲಿ ವೃತ್ತನಾಮಗಳಂತೆ ಬರೆದರು. ಕಾಲಿಗೆ ಗೆಜ್ಜೆ ಕಟ್ಟಿ, ಪೂಜಾ ಸಮಯಗಳಲ್ಲಿ ಹಾಡಿಕೊಂಡು ನರ್ತಿಸುವ ಸಲುವಾಗಿಯೇ ಕೀರ್ತನೆಗಳನ್ನು ರಚಿಸಿದರು. ಕನ್ನಡ ದೇಶದಲ್ಲಿ ಗೆಜ್ಜೆ ಕಟ್ಟಿ ಹಾಡುತ್ತಾ ನರ್ತಿಸುವ ಸಂಪ್ರದಾಯ ಶ್ರೀಪಾದರಾಜರಿಂದಲೇ ಪ್ರಾರಂಭ ವಾಯಿತು. ಸಪ್ತತಾಳಗಳನ್ನು ಬಳಸಿಕೊಂಡು ಸುಳಾದಿ ಗಳನ್ನು ಮೊತ್ತಮೊದಲಿಗೆ ರಚಿಸಿದ ಕೀರ್ತಿಯೂ ಶ್ರೀಪಾದರಾಜರದೇ. ಹೀಗೆ ಹಲವು ಅಂಶಗಳಲ್ಲಿ ಅವರು ನಮ್ಮ ಕನ್ನಡ ದೇಶಕ್ಕೆ ಪ್ರಥಮ ಪುರುಷರಾಗಿದ್ದಾರೆ ಮತ್ತು ಪ್ರಾತಃಸ್ಮರಣೀಯರಾಗಿದ್ದಾರೆ.
ಕಲಿಯುಗದಲ್ಲಿ ಭಗವಂತನನ್ನು ಒಲಿಸಿಕೊಳ್ಳ ಬೇಕಾದರೆ ಒಂದೇ ಒಂದು ಮಾರ್ಗ. ಅದು ಸಂಗೀತ- ಗಾನ- ಇದರಿಂದ ಮಾತ್ರವೇ ದೇವರು ಸುಲಭವಾಗಿ ಒಲಿಯಲು ಸಾಧ್ಯ ಎಂದು ಶ್ರೀಪಾದರಾಜರು ನಂಬಿದ್ದರು.
ಗಾನದ ಪರಂಪರೆಯನ್ನೇ ಕರ್ನಾಟಕದಲ್ಲಿ ಪ್ರಾರಂಭ ಮಾಡಿದವರು ಶ್ರೀಪಾದರಾಜರು.
ಅವರ ಕೀರ್ತನೆಗಳು ಬರಿಯ ವೇದಾಂತವಲ್ಲ, ಕೇವಲ ಭಕ್ತಿರಸವೇ ಅಲ್ಲ, ಹೇಗೆ ಕಾವ್ಯಶಕ್ತಿಯಿಂದ ಕೂಡಿದೆ ಎನ್ನುವುದನ್ನು ಈ ಉದಾಹರಣೆಯಿಂದ ಕಾಣಬಹುದು:
ಭೂಮಿಯನ್ನು ಚಿನ್ನದ ತೊಟ್ಟಿಲು ಮಾಡಿ
ಸೋಮ ಸೂರ್ಯರೆಂಬ ಕಲಶವ ಹೂಡಿ
ನೇಮದಿ ವೇದಗಳ ಸರಪಣಿ ಮಾಡಿ
ಆ ಮಹಾಕಾಶಕ್ಕೆ ಕೊಂಡಿಗಳ ಹಾಕು ||
ಭೂಮಿಯೇ ಒಂದು ಚಿನ್ನದ ತೊಟ್ಟಿಲಂತೆ; ಅದಕ್ಕೆ ಸೂರ್ಯ-ಚಂದ್ರರನ್ನೇ ಕಲಶವಾಗಿ ಮಾಡುವುದಂತೆ; ವೇದಗಳೆಂಬ ಜ್ಞಾನವನ್ನೇ ಸರಪಣಿಯಾಗಿ ಮಾಡುವು ದಂತೆ; ಆ ಮಹಾ ಆಕಾಶಕ್ಕೇ ಕೊಂಡಿಗಳನ್ನು ಹಾಕುವು ದಂತೆ – ಇದಕ್ಕೆ ಭೂಮಿಯೆಂಬ ಚಿನ್ನದ ತೊಟ್ಟಿಲನ್ನು ತೂಗಿ ಬಿಟ್ಟಾಗ ಚಿತ್ರ ಅದೆಷ್ಟು ಭವ್ಯ ಹಾಗೂ ಅರ್ಥವತ್ತಾದುದು ಎಂಬುದನ್ನು ನೋಡಿ.
ಮನಮುಟ್ಟುವ ಉಪದೇಶ
ಸುಲಭವಾದ ಕನ್ನಡದಲ್ಲಿ ನೆನಪಿಡಲು ಸುಲಭ ವಾಗುವಂತೆ ಸಂಗೀತದ ಸವಿ ಬೆರೆಸಿ ಜನಕ್ಕೆ ಮಾರ್ಗ ದರ್ಶನ ಮಾಡಿದರು ಶ್ರೀಪಾದರಾಜರು. ಮನುಷ್ಯ ಹುಟ್ಟಿದುದಕ್ಕೆ ತನ್ನ ಬಾಳನ್ನು ಸಾರ್ಥಕ ಮಾಡಿಕೊಳ್ಳ ಬೇಕು, ಜೀವನದಲ್ಲಿ ಯಾವುದು ನಿಜವಾಗಿ ಒಳ್ಳೆಯದು ಮತ್ತು ಮುಖ್ಯ, ಯಾವುದು ಆಕರ್ಷಕವಾಗಿ ಕಂಡರೂ ನಿಜವಾಗಿ ಕೆಟ್ಟದು ಮತ್ತು ಅಮುಖ್ಯ ಎಂಬುದನ್ನು ಒಂದು ಹಾಡಿನಲ್ಲಿ ಹೇಳಿದ್ದಾರೆ. ಬದುಕಿನಲ್ಲಿ ಏನನ್ನೂ ಮಾಡದೆ, ಹೆಂಡತಿ ಮಕ್ಕಳ ಸುಖವನ್ನೇ ಮುಖ್ಯ ಎಂದುಕೊಂಡು ದುಡಿದು ಬಾಳನ್ನು ಸವೆಸುವವರನ್ನು ವರ್ಣಿಸಿದ್ದಾರೆ.
ಕುರುಡ ನಾಯಿ ಸಂತೆಗೆ ಬಂತಂತೆ |
ಅದು ಏಕೆ ಬಂತೋ ||
ಖಂಡಸಕ್ಕರೆ ಹಿತವಲ್ಲಂತೆ ಖಂಡಾ ಎಲುಬು ಕಡಿಯಿತಂತೆ ||
ಹೆಂಡಿರುಮಕ್ಕಳ ನೆಚ್ಚಿತಂತ ಕೊಂಡು ಹೋಗುವಾದಾರಿಲ್ಲವಂತೆ ||
ನಾನಾಜನ್ಮವೆತ್ತಿತಂತೆ ಮಾನವನಾಗಿ ಪುಟ್ಟಿತಂತೆ |
ಕಾನನ ಕಾನನ ತಿರುಗಿತಂತ ತಾನು ತನ್ನ ಮರೆತಿತಂತೆ ||
ಮಂಗನ ಕೈಯ ಮಾಣಿಕ್ಯದಂತೆ ಹಾಂಗೂ ಹೀಂಗೂ ಕಳೆಯಿತಂತೆ |
ರಂಗವಿಠ್ಠಲನ ಮರೆತಿತಂತೆ ಭಂಗ ಬಹಳ ಪಟ್ಟಿತಂತೆ ||
(ಕಾನನ ಎಂದರೆ ಕಾಡು)
ಯಾರೂ ಯಾರಿಗೆ ಜೀವನದಲ್ಲಿ ಏನೇನು ಭೂಷಣ, ಒಳ್ಳೆಯದನ್ನು ಮಾಡುತ್ತದೆ, ಕೀರ್ತಿಯನ್ನು ತರುತ್ತದೆ ಎಂದು ‘ಭೂಷಣಕೆ ಭೂಷಣ ಇದು ಭೂಷಣ’ ಎಂಬ ಹಾಡಿನಲ್ಲಿ ಹೇಳಿದ್ದಾರೆ. ಅದರ ಕೆಲವು ಪಂಕ್ತಿಗಳು ಇವು :
ನಾಲಿಗೆಗೆ ಭೂಷಣ ನಾರಾಯಣ ನಾಮ |
ಕಾಲಿಗೆ ಭೂಷಣ ಹರಿಯಾತ್ರೆಯು ||
ದಾನವೇ ಭೂಷಣ ಇರುವ ಹಸ್ತಂಗಳಿಗೆ |
ಜ್ಞಾನವೇ ಭೂಷಣ ಮಾನವರಿಗೆ ||
ಶ್ರೀಪಾದರಾಜರು ತುಂಬ ತೊಂಬತ್ತೆಂಟು ವರ್ಷಗಳ ವರೆಗೆ ಬದುಕಿದ್ದರು. ಅವರು ಕಾಲವಾದದ್ದು – ಅಂದರೆ ವೃಂದಾವನ ಪ್ರವೇಶಮಾಡಿದ್ದು ೧೫೦೪ರ ಏಪ್ರಿಲ್ ೧೪ರಂದು. ಈಗಲೂ ಮುಳಬಾಗಲಿಗೆ ಹೋದರೆ ಶ್ರೀಪಾದರಾಜರ ವೃಂದಾವನ ನರಸಿಂಹತೀರ್ಥದ ದಂಡೆಯಲ್ಲಿರುವುದು ಕಂಡು ಬರುತ್ತದೆ. ಅವರ ಹೆಸರಿನಲ್ಲಿ ಈಗಲೂ ವರ್ಷ ಕ್ಕೊಮ್ಮೆ ರಥೋತ್ಸವ ಜರಗುತ್ತದೆ. ಈ ಮಹಾತ್ಮರನ್ನು ಕನ್ನಡನಾಡು ಮರೆಯುವುದು ಸಾಧ್ಯವೇ ಇಲ್ಲ. ದಾಸ ಸಾಹಿತ್ಯವೆಂಬ ದಡಗಳಲ್ಲಿ ಸಾಹಿತ್ಯ ಸಂಗೀತಗಳನ್ನು ತುಂಬಿ ಭಕ್ತಿರಸವೆಂಬ ಪೂರ್ಣ ಪ್ರವಾಹವನ್ನೇ ಹರಿಸಲು ಕಾರಣರಾದವರು ಶ್ರೀಪಾದರಾಜರು.
ಅಗೋ, ಶ್ರೀ ವ್ಯಾಸತೀರ್ಥರು ಅವರಿಗೆ ನಮಿಸುತ್ತಿ ದ್ದಾರೆ. ಅವರ ಜೊತೆಗೆ ನಾವೂ ನಮಿಸೋಣ ಬನ್ನಿ :
ಸಿರಿಕೃಷ್ಣ ದಿವ್ಯಪಾದಾಬ್ಜ ಚಿಂತಾಲೋಲ
ವರ ಹೇಮವರ್ಣ ಮುನಿಪತಿಯ ಸುಕುಮಾರ
ಗುರುಕುಲ ತಿಲಕ ಶ್ರೀಪಾದರಾಯ ಅಮಿತೋದ್ಧಾರ
ಶರಣಜನ ಸುರಧೇನು ಭಕ್ತಮಂದಾರ.
ಶ್ರೀಪಾದರಾಜರ ಹಾಡುಗಳು
ಮಹಿಮೆ ಸಾಲದೆ ಇಷ್ಱೆ ಮಹಿಮೆ ಸಾಲದೆ ||ಪ||
ಅಹಿಶಯನನ ಒಲುಮೆಯಿಂದ ಮಹಿಳೊಮ್ಮೆ ಶ್ರೀಪಾದರಾಯರ ||ಅ.ಪ||
ಮುತ್ತಿನ ಕವಚ ಮೇಲ ತುರಾಯಿ ರತ್ನ ಕೆತ್ತಿದ ಕರ್ಣ ಕುಂಡಲ
ಕಸ್ತೂರಿ ತಿಲಕ ಶ್ರೀಗಂಧ ಲೇಪನ ವಿಸ್ತಾರದಿಂದ ಮೇರದು ಬರಲು ||೧||
ಹರಿಗೆ ಸಮರ್ಪಿಸಿದ ನಾನಾ ಪರಿಯ ಶಾಖಂಗಳನ್ನ ಭುಂಜಿಸಿ
ನರರು ನಗಲು ಶ್ರೀ ಕೃಷ್ಣನ ಪರಮದಿಂದ ಹುಸಿಯಮಾಡಿದ ||೨||
ವಿಪ್ರಗೆ ಬ್ರಹ್ಮತ್ಯೆ ದೋಷ ಬರಲು ಕ್ಷಿಪ್ತ ಶಂಖೊದಕದಿ ಕಳೆದು
ಅಪ್ರ ಬುದ್ಧರು ದೊಷಿಸೆ ಗೇರೆಣ್ಣೆ ಕಪ್ಪು ಹಸನ ಶುಭ್ರ ಮಾಡಿದ ||೩||
---------------------
ಅನಂತ ಕಾಲದಲ್ಲಿ ಯಾವ ಪುಣ್ಯದಲ್ಲಿ
ಎನ್ನಮನ ನಿನ್ನಲ್ಲಿ ಎರಗಿಸೋ
ಎನ್ನ ಮನ ನಿನ್ನ ಚರಣದೊಳೊಮ್ಮೆ ಇಟ್ಟು
ಸಲಹು ರಂಗವಿಠಲ||
-------------------------
ಆಡಲು ಪೋಗೊಣು ಬಾರೊ ರಂಗ
ಕೂಡಿ ಯಮುನಾ ತೀರದಲ್ಲಿ ||ಪ||
ಚಿಣ್ಣಿಕೋಲು ಚೆಂಡು ಬುಗರಿ
ಸಣ್ಣ ಸಣ್ಣ ಆಟಗಳನು
ಕಣ್ಣಮುಚ್ಚಲಿಕೆ ಕುಂಟಲಿಪಿ
ಬಣ್ಣ ಬಣ್ಣದ ಆಟಗಳನು ||೧||
ಜಾಹ್ನವಿಯ ತೀರವಂತೆ
ಜನಕರಾಜನ ಕುವರಿಯಂತೆ
ಜಾನಕಿಯ ವಿವಾಹವಂತೆ
ಜಾಣ ನೀನು ಬರಬೇಕಂತೆ ||೨||
ಪುಂಡರೀಯ ನಗರವಂತೆ
ಭೀಷ್ಮಕರಾಜನ ಕುವರಿಯಂತೆ
ಶಿಶುಪಾಲನ್ನ ಒಲ್ಲಳಂತೆ
ನಿಮಗೆ ಓಲೆ ಬರೆದಳಂತೆ||೩||
ಕೌರವರು ಪಾಂಡವರು
ಲೆತ್ತವಾಡಿ ಸೋತರಂತೆ
ರಾಜ್ಯವನ್ನು ಬಿಟ್ಟರಂತೆ
ರಂಗವಿಠಲ ಬರಬೇಕಂತೆ ||೪||
------------------------
( ನಾಟಿ ರಾಗ ಖಂಡಛಾಪು ತಾಳ)
ಶ್ರೀರಂಗವಿಠಲನ ಶ್ರೀ ಮಕುಟಕೆ ಶರಣು ||ಪ||
ಶಿರದಲೊಪ್ಪುವ ನೀಲಕುಂತಳಕೆ ಶರಣು
ಸಿರಿ ಸಹೋದರನರ್ಧದವಳಿಗೆ ಶರಣು ||ಅ.ಪ||
ಸೊಂಪು ನೋಟದ ಚೆಲುವ ಸೋಗೆಗಣ್ಣಿಗೆ ಶರಣು
ಸಂಪಿಗೆಯ ಕುಸುಮಸಮ ನಾಸಿಕಕೆ ಶರಣು
ಗುಂಪುರತ್ನದ ಕರ್ಣಕುಂಡಲಗಳಿಗೆ ಶರಣು
ಇಂಪುದರ್ವಣನಿಭ ಕಪೋಲಗಳಿಗೆ ಶರಣು ||೧||
ಕುಂದಕುಟ್ಮಲ ಪೋಲ್ವ ದಂತಪಕ್ತಿಗೆ ಶರಣು
ಅಂದವಾಗಿರುವ ಬಿಂಬೋಷ್ಠಕೆ ಶರಣು
ಚಂದ್ರಿಕಾನಿಭ ಮುದ್ದು ಮಂದಹಾಸಕೆ ಶರಣು
ನಂದಗೋಪನ ಮುದ್ದು ಕಂದನಿಗೆ ಶರಣು ||೨||
ಅಬ್ಜನಾಭನ ದಿವ್ಯ ಕಂಬು ಕಂಠಕೆ ಶರಣು
ಅಬ್ಜಮುಖಿಯಿರುವ ವಕ್ಷಸ್ಥಳಕೆ ಶರಣು
ಕುಬ್ಜೆಯ ಡೊಂಕ ತಿದ್ದಿದ ಭುಜಗಳಿಗೆ ಶರಣು
ಅಬ್ಜಜಾಸನನ ಪೆತ್ತ ನಾಭಿಗೆ ಶರಣು ||೩||
ರನ್ನಗಂಟೆಗಳಿರುವ ನಿನ್ನ ಕಟಿಗೆ ಶರಣು
----------**********----------
